»

ಆಯುಧ ಪೂಜೆ ಹಾಗೂ ವಿಜಯ-ದಶಮಿಯ ಶುಭಾಶಯಗಳು

ಆಯುಧ ಪೂಜೆಯ ಬಗ್ಗೆ ಎರಡು-ಮೂರು ವರ್ಣಣೆಗಳು ಇರುವಂತೆ ಕಾಣುತ್ತದೆ.ಆದರೆ ಇಲ್ಲಿ ಈಗ ತಿಳಿಸಲಿರುವ ಸನ್ನಿವೇಶಕ್ಕೆ ಯಾವ ಆದಾರವೂ ಇರುವುದಿಲ್ಲ. ಕಲ್ಪನೆಯಂತು ಅಲ್ಲವೇ ಅಲ್ಲ, ನೀವೂ ಸಹ ಅಲ್ಲಿ-ಇಲ್ಲಿ ಈಗಾಗಲೇ ಕೇಳಿರುತ್ತೀರಿ.

 

ಆರಂಭ:

ತನ್ನ ಪ್ರೀತಿಯ ಅಳೀಮಯ್ಯ ದುರ್ಯೋಧನನಿಗೆ ಶಕುನಿಮಾಮ ಯಾವಾಗ್ಲೂ ದುರಾಸೆಯ ಬೀಜವನ್ನ ಬಿತ್ತುತ್ತಾ ಬರ್ತಿರ್ತಾನೆ. ಒಂದು ದಿನ ಪಾಂಡವರನ್ನ ಜೂಜಾಟಕ್ಕೆ ಆಹ್ವಾನಿಸ್ತಾರೆ ಕೌರವರು. ಧರ್ಮರಾಯನ ನಾಯಕತ್ವದಲ್ಲಿ ಪಾಂಡವರು ಜೂಜಾಟದ ಆಹ್ವಾನವನ್ನು ಸ್ವೀಕರಿಸ್ತಾರೆ.

ಉಭಯ ಪಕ್ಷದವರೂ ಕೂತೂ ಆಟ ಆಡ್ತಾರೆ, ಶಕುನಿ ಮಾಮಾ ಕುತಂತ್ರದಿಂದ, ಪಗಡೇಯಾಟದಲ್ಲಿ ಪಾಂಡವರನ್ನು ಸಂಪೂರ್ಣ ಸೋಲಿಸ್ತಾನೆ. ಮುಂದೆ ಜರುಗಿದ ದ್ರೌಪದಿ ವಸ್ತ್ರಾಪಹರಣ, ಇತ್ಯಾದಿ ಘಟನೆಗಳನ್ನು ನಾವು ಈಗಲೂ ಅನೇಕ ನಾಟಕಗಳಲ್ಲಿ, ಸಿನಿಮಾಗಳಲ್ಲಿ ನೋಡಿದೀವಿ.

ಅಂತೂ ಕೊನೆಗೆ ಕೌರವರು ಒಂದು ಅವಕಾಶವನ್ನು ಪಾಂಡವರಿಗೆ ನೀಡುತ್ತಾರೆ. ಏನಪ್ಪಾ ಅಂದ್ರೆ ಪಾಂಡವರು 13 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸವನ್ನು ಮಾಡಿ ಬರಬೇಕು, ಅಜ್ಞಾತವಾಸದ ಸಮಯದಲ್ಲಿ ಒಂದು ವೇಳೆ ಯಾರಾದರೂ ಇವರನ್ನು ಪಾಂಡವರೆಂದು ಗುರುತಿಸಿದ್ದೇ ಆದಲ್ಲಿ, ಪಾಂಡವರು ಮತ್ತೇ 13 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸವನ್ನು ಮುಂದುವರಿಸಬೇಕು.

ಒಂದು ವೇಳೇ ಪಾಂಡವರು ಈ ಶರತ್ತನ್ನು ಯಶಸ್ವಿಯಾಗಿ ಪೂರೈಸಿದ್ದೇ ಆದಲ್ಲಿ ಅವರಿಗೆ ಅವರ ಇಂದ್ರಪ್ರಸ್ಥ (ರಾಜ್ಯ) ವನ್ನು ಹಿಂತಿರುಗಿಸುವುದಾಗಿ ಪರಸ್ಪರರೂ ಒಪ್ಪಂದಕ್ಕೇ ಬರುತ್ತಾರೆ.

ಪಾಂಡವರು 13 ವರ್ಷ ವನವಾಸವನ್ನು ಕಳೆದ ನಂತರ ಕೊನೆ ಒಂದು ವರ್ಷದ ಅವಧಿಯ ಅಜ್ಞಾತವಾಸವನ್ನು ಕಳೆಯಲು ವಿರಾಟರಾಜನ ಆಸ್ಥಾನದಲ್ಲಿ ವೇ‍ಷ ಬದಲಿಸಿಕೊಂಡು ಆಶ್ರಯ ಪಡೆದುಕೊಳ್ಳುತ್ತಾರೆ. ಈ ನಡುವೆ ದುರ್ಯೋಧನ ಮತ್ತು ಅವನ ಮಾಮ ಶಕುನಿ ಮಾತ್ರ ಎಲ್ಲಾ ದಿಕ್ಕಿಗೂ ಗೂಡಾಚಾರರನ್ನು ಕಳಿಸಿ ಪಾಂಡವರ ಇರುವಿಕೆಯನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುತ್ತಾನೆ.

ಇಂತಃ ಸಮಯದಲ್ಲಿಯೇ ಒಂದು ಸುದ್ದಿಯನ್ನು ದುರ್ಯೋಧನನ ಗೂಡಾಚಾರರು ತರುತ್ತಾರೆ. ವಿರಾಟರಾಜ್ಯದ ಮುಖ್ಯ ಸೇನಾಧಿಪತಿಯಾದ ಕೀಚಕನನ್ನು ಯಾರೋ ಕೊಂದಿದ್ದಾರೆ ಎಂದು ಸುದ್ದಿ. ದುರ್ಯೋಧನನು ಈ ಘಟನೆಯನ್ನು ಕೂಡಲೇ ಅವಲೋಕಿಸಲು ಆರಂಭಿಸುತ್ತಾನೆ. ಕೀಚಕ ಒಬ್ಬ ಬಲಶಾಲಿ, ಅವನನ್ನು ಕೊಲ್ಲಲು ಸಾಧ್ಯವಿರುವುದು ಕೇವಲ ಮೂವರಿಗೇ ಮಾತ್ರ, ಒಂದು ಭಲರಾಮ, ಅಥವಾ ಭೀಮ ಅಥವಾ ಸ್ವತಃ ತಾನೇ ಕೊಲ್ಲದ ಹೊರತು ಕೀಚಕನನ್ನು ಮಣಿಸಲು ಈ ಭೂಮಿಯಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಬಹುಬೇಗ ಕಂಡುಕೊಳ್ಳುತ್ತಾನೆ.

ಆದರೆ ಭಲರಾಮ ಕೀಚಕನನ್ನು ಕೊಂದಿರಲು ಪ್ರಯತ್ನಿಸಿಲ್ಲ, ತಾನೂ ಸಹ ಈ ಕೆಲಸಕ್ಕೆ ಕೈ ಹಾಕಿಲ್ಲ, ಇದರ ಅರ್ಥ ಏನು? ಭೀಮನೇ ಕೀಚಕನನ್ನು ಕೊಂದಿರುವುದು!! ಆಹಾಆಹಾಆಹಾ… ಮಾಮ ಪಾಂಡವರು ವಿರಾಟ ರಾಜ್ಯದಲ್ಲಿಯೇ ತಲೆಮರೆಸಿ ಕೊಂಡಿದ್ದಾರೆ. ಈ ಕೂಡಲೇ ಹೋಗಿ ಅವರನ್ನು ಗುರುತಿಸಿದರೆ, ಅವರನ್ನು ಮತ್ತೆ 13 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾನಕ್ಕೆ ಓಡಿಸಬಹುದು. ಅಲ್ಲಿಗೆ ಅವರು ಮತ್ತೆ ಹಿಂತಿರುಗಿ ಬರುವಷ್ಟರಲ್ಲಿ ಅವರೂ ವಯಸ್ಸಾಗಿ ರಾಜ್ಯದ ಆಸೆಯನ್ನೂ ಕೈ ಬಿಟ್ಟಿರುತ್ತಾರೆ. ಆಗ ಇಡೀ ಕುರುಕ್ಷೇತ್ರ ಹಾಗೂ ಇಂದ್ರಪ್ರಸ್ಥ ಎರಡೂ ನನ್ನದೇ ಆಗುತ್ತದೇ. ಎಂದು ಲೆಕ್ಕ ಹಾಕುತ್ತಾನೆ.

ವಿರಾಟ ರಾಜ್ಯದ ಅಕ್ಕ-ಪಕ್ಕದ ರಾಜ್ಯದ ರಾಜರುಗಳಿಗೆ ವಿರಾಟರಾಜ್ಯದ ಗೋವುಗಳನ್ನು ಕದಿಯುವಂತೆ ಪ್ರೋತ್ಸಾಹಿಸುತ್ತಾನೆ ದುರ್ಯೋಧನ. ಇದಕ್ಕೆ ಒಪ್ಪಿದ ತ್ರಿಗರ್ತದ ರಾಜ ವಿರಾಟರಾಜ್ಯದ ಗೋವುಗಳನ್ನು ಹುಲ್ಲುಗಾವಲಿನಲ್ಲಿ ಬಂದು ಕದಿಯುವ ಪ್ರಯತ್ನ ಮಾಡುತ್ತಾನೆ. ಆಗ ವಿರಾಟರಾಜ್ಯದ ರಾಜ ತನ್ನ ಸೇನೆಯೊಡನೆ ತ್ರಿಗರ್ತರ ಮೇಲೆ ಯುದ್ದಕ್ಕ ಸಿದ್ದನಾಗುತ್ತಾನೆ. ಅಗ ವಿರಾಟನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ “ಕಂಕ” ಅಂದರೆ ದರ್ಮರಾಯನೂ ಯುದ್ದಕ್ಕೆ ಹೊರಡುತ್ತಾನೆ. ಜೊತೆಗೆ ಅಡಿಗೆಭಟ್ಟನ ವೇಷದಲ್ಲಿದ್ದ ಭೀಮನನ್ನೂ, ಕುದುರೆ ಹಾಗೂ ಗೋಪಾಲಕರಾಗಿದ್ದ ನಕುಲ-ಸಹದೇವರನ್ನೂ ಕರೆದುಕೊಂಡು ಯುದ್ದಕ್ಕೆ ಹೊರಡುತ್ತಾರೆ.

ಇದೇ ಸನ್ನಿವೇಶಕ್ಕೆ ಸಿದ್ದನಾಗಿ ಕಾಯುತ್ತಿದ್ದ ದುರ್ಯೋಧನ ವಿರಾಟರಾಜ್ಯದ ಮತ್ತೊಂದು ಕಡೆಯಿಂದ ಆಕ್ರಮಣವನ್ನು ಆರಂಭಿಸುತ್ತಾನೆ. ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ, ಶಕುನಿ ಹೀಗೇ ಎಲ್ಲಾ ಅತಿರಥ-ಮಾಹಾರಥಿಗಳೂ ಸೇರಿ ಅಕ್ರಮಣಕ್ಕೆ ಸಜ್ಜಾಗಿ ನಿಲ್ಲುತ್ತಾರೆ. ಆದರೆ ದುರ್ಯೋಧನನ ಉಪಾಯವಿದ್ದುದ್ದು, ವಿರಾಟರಾಜ್ಯವನ್ನು ಗೆದ್ದು ಕೊಳ್ಳುವುದಲ್ಲ, ಕೇವಲ ಪಾಂಡವರನ್ನು ಗುರುತಿಸುವುದು ಮತ್ತು ಆ ಮೂಲಕ ಅವರ ಒಪ್ಪಂದದಂತೆ ಅವರನ್ನು ಮತ್ತೊಮ್ಮೆ ವನವಾಸ ಹಾಗೂ ಅಜ್ಞಾತವಾಸಕ್ಕೆ ಕಳುಹಿಸುದು. ಆದರೆ ಇದಾವುದರ ಮಾಹಿತಿಯೂ ಇರದ ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯರು ಮಾತ್ರ ವಿರಾಟರ ಮೇಲೆ ನಿಜವಾದ ಅಕ್ರಮಣಕ್ಕೇಂದೇ ಸಜ್ಜಾಗಿರುತ್ತಾರೆ.

ಆದರೆ ಕೌರವರ ಪಡೆಯ ಈ ಘಟಾನುಘಟಿಗಳನ್ನು ಎದುರಿಸಲು ವಿರಾಜರಾಜ್ಯದ ಆಸ್ಥಾನದಲ್ಲಿ ಯಾವ ವೀರನೂ ಇಲ್ಲ! ಎಲ್ಲರೂ ತ್ರಿಗರ್ತರ ಮೇಲೆ ಯುದ್ದಕ್ಕೆ ಹೋಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಿರಾಟದ ರಾಜಕುಮಾರ “ಉತ್ತರಕುಮಾರ” ತನ್ನ ಒಲೆ ಮುಂದಿನ ಪೌರುಷವನ್ನು ಆಸ್ಥಾನದ ಹೆಣ್ಣು ಹೈಕಳ ಮುಂದೆ ತೋರ್ಪಡಿಸುತ್ತಾ ಕೌರವರ ಮೇಲಿನ ಯುದ್ದಕ್ಕೇ ತಾನೇ ಹೊರಡುವುದಾಗಿ ಸಿದ್ದನಾಗುತ್ತಾನೆ. ಆಗ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನೂ ಸಾರಥಿಯಾಗಿ ಹೊರಡುತ್ತಾನೆ.

ಯಾವೊಂದು ಸೇನೆಯ ನೆರವೂ ಇಲ್ಲದೇ, ಏಕಾಂಗಿಯಾಗಿ ಕೌರವರನ್ನು ಹಿಮ್ಮೆಟ್ಟುವುದಾಗಿ ಪರಾಕ್ರಮದ ಮಾತನ್ನಾಡಿದ್ದ ಉತ್ತರಕುಮಾರ, ಯುದ್ದಭೂಮಿ ಸಮೀಪಿಸುತ್ತಿದ್ದಂತೆ ಕೌರವರ ಸೇನೆಯನ್ನು ನೋಡಿದ್ದೇ ತಡ, ಯುದ್ದವೂ ಬೇಡ, ರಾಜ್ಯವೂ ಬೇಡ. ನನಗೆ ನನ್ನ ಪ್ರಾಣ ಉಳಿದರೆ ಸಾಕೆಂದು ರಥದಿಂದ ಇಳಿದು ಯುದ್ದಭೂಮಿಗೆ ಬೆನ್ನುಮಾಡಿ ಓಡಲಾರಂಭಿಸುತ್ತಾನೆ.

ಈ ಸನ್ನಿವೇಶವನ್ನು ಕಂಡು ಕೌರವರ ಸೈನ್ಯ ಗೊಳ್ಳೆಂದು ನಗಲಾರಂಭಿಸುತ್ತದೆ. ಪರಾಕ್ರಮಿಯೂ, ಅತ್ಯುತ್ತಮ ಬಿಲ್ವಿದ್ದೆಗಾರನೂ, ಎಲ್ಲಕ್ಕೂ ಮುಖ್ಯವಾಗಿ ಕ್ಷತ್ರಿಯ ಧರ್ಮದ ಪಕ್ಕಾ ಪರಿಪಾಲಕನೂ, ಇನ್ನೂ ಮುಖ್ಯವಾಗಿ ಕೌರವರರಿಂದ ಮುಖಭಂಗವನ್ನನುಭವಿಸಿದ್ದ ಅರ್ಜುನನಿಗೆ ಇದು ಸಹಿಸಲಸಾದ್ಯವಾಗುತ್ತದೆ.

ಅಷ್ಟರಲ್ಲಿ ರಥದಿಂದ ಇಳಿದು ಓಡಿ ಹೋಗುತ್ತಿದ್ದ ಉತ್ತರಕುಮಾರನನ್ನು ಎತ್ತಿಕೊಂಡು ತಂದು ತನ್ನ ಸಾರಥಿಯಾಗುವಂತೆ ಒಪ್ಪಿಸುತ್ತಾನೆ ಅರ್ಜುನ. ಅಜ್ಞಾತವಾಸದ ಸಲುವಾಗಿ ತಮ್ಮೆಲ್ಲಾ ಆಯುಧಗಳನ್ನೂ ಒಂದು ಬಟ್ಟೆಯಲ್ಲಿ ಸುತ್ತಿ ಕಟ್ಟಿ, ಊರ ಹೊರಗಿನ ಬನ್ನಿಪತ್ರೆಯ ಮರದ ಮೇಲೆ ಅವಿತಿಟ್ಟಿದ್ದ ಬಟ್ಟೆ ಗಂಟನ್ನು ಉತ್ತರಕುಮಾರನ ಸಹಾಯದಿಂದ ಕೆಳಗಿಳಿಸಿಕೊಳ್ಳುತ್ತಾನೆ.

ತನ್ನ ಪ್ರಸಿದ್ದ ಬಿಲ್ಲು “ಗಾಂಡಿವ”ವನ್ನು ಒಮ್ಮೆ ಮೀಟಿ ತಾನೂ ಯುದ್ದಕ್ಕೇ ಸಿದ್ದನಿರುವುದಾಗಿ ಕೌರವರಿಗೆ ಸಂದೇಶವನ್ನು ಕಳಿಸುತ್ತಾನೆ. ನಂತರ ಇಡೀ ಕೌರವ ಸೇನೆಯನ್ನು ದೂಳೀಪಟಮಾಡಿ, ಕರ್ಣ, ಭೀಷ್ಮ. ದ್ರೋಣ, ಕೃಪಾಚಾರ್ಯ ಎಲ್ಲರನ್ನೂ ಮೂರ್ಛೆಗೊಳಿಸಿ ಯುದ್ದವನ್ನು ಗೆದ್ದು ಹಿಂತಿರುಗುತ್ತಾನೆ.

ಅಧರ್ಮದ ಕೌರವರ ಮೇಲೇ ವಿಜಯವನ್ನು ಸಾಧಿಸಿದ ಈ ದಿನವನ್ನು ವಿಜಯ-ದಶಮಿಯಾಗಿ ನಾವು ಈಗಲೂ ಆಚರಿಸುತ್ತೇವೆ. ಒಂದು ವರ್ಷದಿಂದ ಅವಿತಿಟ್ಟಿದ್ದ ಪಾಂಡವರ ಆಯುಧಗಳನ್ನು ಹೊರತೆಗೆದ ಕಾರಣಕ್ಕೆ ಅದನ್ನು “ಆಯುಧಪೂಜೆ”ಯ ದಿನವೆಂದು ಆಚರಿಸುತ್ತೇವೆ.

———————————————

ತುಂಬಾ ಸಣ್ಣದಾಗಿಯೂ, ಸರಳವಾಗಿಯೂ ಬರೆಯ ಬೇಕೆಂದು ಆರಂಭಿಸಿದ ಈ ಲೇಖನ ಇಷ್ಟುದ್ದ ಆಗಿದ್ದಕ್ಕೆ ಕ್ಷಮೆ ಇರಲಿ.

ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯ-ದಶಮಿಯ ಶುಭಾಶಯಗಳು.

———————————————-

ಮೇಲಿನ ಮಾಹಿತಿಯಲ್ಲಿ ಏನಾದರೂ ತಪ್ಪುಗಳು ಕಂಡು ಬಂದಲ್ಲಿ ಕ್ಷಮೆ ಇರಲಿ.

 

 

 

Permanent link to this article: http://www.pada.pro/%e0%b2%86%e0%b2%af%e0%b3%81%e0%b2%a7-%e0%b2%aa%e0%b3%82%e0%b2%9c%e0%b3%86-%e0%b2%b9%e0%b2%be%e0%b2%97%e0%b3%82-%e0%b2%b5%e0%b2%bf%e0%b2%9c%e0%b2%af-%e0%b2%a6%e0%b2%b6%e0%b2%ae%e0%b2%bf%e0%b2%af/

1 comment

  1. Prasanna Rameshwara T S

    ತಮಗೂ ಆಯುಧ ಪೂಜೆ ಮತ್ತು ವಿಜಯದಷಮಿಯ ಶುಭಾಶಯಗಳು. ಶೀಘ್ರವೇ ಯಾಂಡ್ರಾಯ್ದ್ ಗಾಗೆ ತಮ್ಮ ಪದ ಸಾಫ್ಟ್ವೇರನ್ನು ಬಿಡುಗದೆ ಮಾಡುತ್ತೀರೆಂದು ನಂಬುತ್ತೇನೆ.

Leave a Reply

Your email address will not be published. Required fields are marked *