«

»

ಹರಿದಾಸ ಸಾಹಿತ್ಯಕ್ಕೊಂದು ಆಂಡ್ರಾಯ್ಡ್ ಸಲಕರಣೆ

ಸುಮಾರು ೧೩ನೇ ಶತಮಾನದಿಂದ ಮೊದಲಾದ ಹರಿದಾಸರ ಪರಂಪರೆ ಇಪ್ಪತ್ತನೇ ಶತಮಾನದ ಮೊದಲ ಭಾಗದವರೆಗೆ ಕನ್ನಡನಾಡಿನಲ್ಲಿ ಹರಿದು ಬಂತು. ಈ ಪರಂಪರೆಯಲ್ಲಿ ಬಂದ ನೂರಾರು ಹರಿದಾಸರು, ಹತ್ತಾರು ಸಾವಿರ ರಚನೆಗಳನ್ನು ಮಾಡಿ ಹೋಗಿದ್ದಾರೆ. ಶ್ರೀಪಾದರಾಯರ, ಪುರಂದರದಾಸರ, ಕನಕದಾಸರ ಹೆಸರು ಕೇಳದ ಕನ್ನಡಿಗರು ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ.ಶತಮಾನಗಳ ಕಾಲ ಮೌಖಿಕವಾಗಿಯೇ ಈ ರಚನೆಗಳು ಒಬ್ಬರಿಂದ ಒಬ್ಬರಿಗೆ ದಾಟಿದವು. ಈ ದಾರಿಯಲ್ಲಿ ಉಳಿದವೆಷ್ಟೋ ಕಳೆದವೆಷ್ಟೋ?

ಕರ್ನಾಟಕ ಸಂಗೀತ ಪಿತಾಮಹರೆಂದು ನಾವು ಹೇಳುವ ಪುರಂದರ ದಾಸರ ರಚನೆಗಳಲ್ಲಿ ಸಾವಿರಕ್ಕೂ ಮೇಲು ಈಗ ಉಳಿದಿವೆಯಾದರೂ, ಹೆಚ್ಚಿನವುಗಳ ಸಂಗೀತ ಹೇಗಿತ್ತೆಂದು ನಮಗೆ ತಿಳಿಯದೇ ಹೋಗಿದೆ. ಆದರೆ ಇಪ್ಪತ್ತನೇ ಶತಮಾನದಲ್ಲಾದ ಪ್ರಯತ್ನಗಳಿಂದ ಹರಿದಾಸರ ಸಾವಿರಾರು ರಚನೆಗಳು ಮುದ್ರಿತವಾಗಿ, ಅವುಗಳು ಇನ್ನಷ್ಟು ಕಳೆದು ಹೋಗುವುದು ತಪ್ಪಿತು.

ಆದರೆ, ಇಪ್ಪತ್ತೊಂದನೇ ಶತಮಾನಕ್ಕೆ ಇಪ್ಪತ್ತನೇ ಶತಮಾನ ಹುಟ್ಟುಹಾಕಿದ ವಿಧಾನಗಳೂ, ಹುಡುಕಿದ ಪರಿಹಾರಗಳೂ ನಡೆಯುತ್ತವೆಯೇ? ಈಗ ಏನಿದ್ದರೂ ಮಾಹಿತಿ ಯುಗ. ಮಾಹಿತಿ ಎಲ್ಲಿ ಬೇಕೆಂದರಲ್ಲಿ ಸಿಗುವಂತೆ ಮಾಡುವ ಸ್ಮಾರ್ಟ್ ಫೋನ್ಯುಗ. ಈಗ, ಕಪಾಟಿನಲ್ಲಿಟ್ಟು ಜೋಡಿಸಿರುವ ಪುಸ್ತಗಳಿಂದ ಬೇಕಾದ ದಾಸರ ರಚನೆಗಳನ್ನು ಹುಡುಕುವುದು ( ಅದು ಹಾಡುವುದಕ್ಕೇ ಇರಬಹುದು, ಇಲ್ಲ ಸಾಹಿತ್ಯ ಸಂಶೋಧನೆಗೇ ಇರಬಹುದು, ಅಥವಾ ಇನ್ನಾವುದೇ ಕುತೂಹಲವನ್ನು ತಣಿಸುವುದಕ್ಕೂ ಇರಬಹುದು) ಸಾಧ್ಯವಾದರೂ, ಸುಲಭ ಸಾಧ್ಯವಲ್ಲ. ಅಥವಾ ಈವತ್ತಿನ ಕಾಲಧರ್ಮಕ್ಕೆ ಒಪ್ಪುವ ಮಾತಲ್ಲ ಎನ್ನೋಣ.

 

ಆದರೆ ತಂತ್ರಜ್ಞಾನದ ಸಹಾಯದಿಂದ ಏನನ್ನಾದರೂ ಕೈಗೆಟುಕುವ ಹಾಗೆ ಮಾಡಬಹುದಲ್ಲ? ಆದರೆ ಅದಕ್ಕೆ ಬೇಕಾದ್ದು ಈ ವಿಷಯದ ಬಗ್ಗೆ ಆಸಕ್ತಿ, ಮತ್ತೆ ತಾಂತ್ರಿಕ ಪರಿಣತಿ. ಹಾಗಾಗಿ, ಹರಿದಾಸ ಸಾಹಿತ್ಯವನ್ನ ನಿಮ್ಮ ಕೈಯಳತೆಯಲ್ಲೇ ಸಿಗುವಂತೆ ಮಾಡಿರುವವರುನಿಮ್ಮಲ್ಲಿ ಹಲವರಿಗೆ ಪರಿಚಿತವಾದ “ಪದ” ತಂತ್ರಾಂಶವನ್ನು ಹೊರತಂದಿದ್ದ ತಂತ್ರಜ್ಞ ಹಾಗೂ ಕನ್ನಡ ಸಾಹಿತ್ಯದಲ್ಲಿ ಆಸಕ್ತರಾದ ಲೋಹಿತ್ ಡಿ ಎಸ್ ಅವರು.

ಕನ್ನಡಿಗರಿಗೆ ಲೋಹಿತ್ ಅವರ ಹೊಸ ಕೊಡುಗೆ – “ದಾಸಸಾಹಿತ್ಯ” ಆಂಡ್ರಾಯ್ಡ್ ಅಪ್ಲಿಕೇಶನ್  ಅಥವಾ ಬೇಕಿದ್ದರೆ, ಅಚ್ಚಕನ್ನಡದಲ್ಲಿ, ದಾಸಸಾಹಿತ್ಯಕ್ಕೊಂದು ಸಲಕರಣೆ ಅನ್ನೋಣ. ಇಲ್ಲಿ ಮೇಲಿನ ಸಾಲಿನಲ್ಲಿ  ಹಾಕಿರುವ ಗೂಗಲ್ ಪ್ಲೇ ಸ್ಟೋರ್ ಕೊಂಡಿಯಿಂದ ನೀವು, ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಹಾಕಿಕೊಳ್ಳಬಹುದು. ಪ್ಲೇ ಸ್ಟೋರ್ ನಲ್ಲಿ ಹುಡುಕಲು ಅನುಕೂಲವಾಗುವಂತೆ ಕೆಳಗಿನ ಚಿತ್ರ ಹಾಕಿದ್ದೇನೆ.

ಸುಮಾರಾಗಿ ನೂರೈವತ್ತು ಹರಿದಾಸರ ಹದಿನೈದುಸಾವಿರ ರಚನೆಗಳಿಗೂ ಹೆಚ್ಚು ಪದ, ಸುಳಾದಿ, ಉಗಾಭೋಗ, ಮುಂಡಿಗೆಗಳನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮೂಡಿಸಬಲ್ಲ ಈ ಸಲಕರಣೆ ಕನ್ನಡಿಗರಿಗೆ ಬಹಳ ಉಪಯುಕ್ತವೆಂಬುದರಲ್ಲಿ ಎರಡು ಮಾತಿಲ್ಲ!ಆಗಿಂದಾಗ್ಗೆ ಮತ್ತೆ ಮತ್ತೆ ಬೇಕಾಗುತ್ತಿರುವ ಹಾಡುಗಳನ್ನು ನೀವು ಗುರ್ತು ಹಾಕಿ ಇಟ್ಟುಕೊಳ್ಳುವ ಸೌಲಭ್ಯವಿದೆ. ಹಾಗೇ ಹರಿದಾಸರ ಹೆಸರಿನ ಮೂಲಕ, ಇಲ್ಲ ಹಾಡಿನ ಸಾಲಿನ ಮೂಲಕ ಹುಡುಕುವ ಸೌಕರ್ಯವೂ ಇದೆ. ನಿಮ್ಮ ಆಂಡ್ರಾಯ್ಡ್ ಫೋನ್ ಗೆ ಇವತ್ತೇ ಹಾಕಿಕೊಳ್ಳಿ. ಮತ್ತೆ , ಇನ್ಯಾವತ್ತೂ ಯಾವ ಹರಿದಾಸರ ಹಾಡೂ ಮರೆತಿದ್ದೇನೆ ಅಂತ ನೀವು ಕೊರಗುವ ಕಾರಣವೇ ಇಲ್ಲ, ಯಾಕಂದರೆ ಅದು ಯಾವಾಗಲೂ ನಿಮ್ಮ ಕೈ ಬೆರಳ ತುದಿಯಲ್ಲೇ ಇರುತ್ತೆ.

ಹಾಗೇ, ನಿಮ್ಮ ಗೆಳೆಯರಲ್ಲಿ ಸಂಗೀತ-ಸಾಹಿತ್ಯಗಳಲ್ಲಿ ಆಸಕ್ತಿ ಇದ್ದವರಿಗೆ ಇಂತಹ ಒಂದು ಒಳ್ಳೇ ಸಲಕರಣೆ ಫೋನ್ ನಲ್ಲಿ ಸಿಗುತ್ತಿರುವ ವಿಷಯವನ್ನ ಮರೀದೆ ತಿಳಿಸಿ! ಪ್ರತಿ ನಿತ್ಯ, ಫೇಸ್ ಬುಕ್ ನಲ್ಲಿ, ಟ್ವಿಟರ್ ನಲ್ಲಿ ಅಥವಾ ವಾಟ್ಸಾಪ್ ನಲ್ಲಿ ಹಾಸ್ಯ ಚಟಾಕಿಗಳನ್ನ ಹಂಚಿಕೊಳ್ಳೋದು ಇದ್ದೇ ಇದೆ. ಇವತ್ತು ಈ ಬರಹ ಓದಿದ್ರಲ್ಲ? ಕೂಡಲೆ ಹಂಚಿಕೊಳ್ತೀರಾ? ಒಂದು ಒಳ್ಳೇ ವಿಷಯವನ್ನ ಹಂಚಿಕೊಂಡ ಪುಣ್ಯ ನಿಮ್ಮದಾಗುತ್ತೆ! ಜೊತೆಗೆ  ಲೋಹಿತ್ ಅವರಿಗೆ, ಹಾಗೇ ಅವರ ರೀತಿಯ ಹಲವಾರು ತಂತ್ರಜ್ಞರಿಗೆ ಇಂತಹ ಇನ್ನಷ್ಟು ಒಳ್ಳೇ ಕೆಲಸಗಳನ್ನ ಮಾಡೋದಕ್ಕೆ ಹುಮ್ಮಸ್ಸೂ ಹೆಚ್ಚುತ್ತೆ. ಏನಂತೀರಾ?

-ಹಂಸಾನಂದಿ

http://hamsanada.blogspot.in/2015/02/blog-post.html

 

Permanent link to this article: https://www.pada.pro/%e0%b2%b9%e0%b2%b0%e0%b2%bf%e0%b2%a6%e0%b2%be%e0%b2%b8-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%95%e0%b3%8d%e0%b2%95%e0%b3%8a%e0%b2%82%e0%b2%a6%e0%b3%81-%e0%b2%86/

1 comment

  1. R N PRASAD

    dasa sahithya app is working properly despite updating/reinstalling. none of the pages are opening. window appears with a remark ” unforunately dasa sahithya app stopped working”

    Please look into and rectifiy.

    The app is very useful, if not rectified will be a great disappointment.

    I am sure you will not disappoint true dasa sahithya lovers.

    Regards

Leave a Reply

Your email address will not be published. Required fields are marked *