«

ಮೆಗಾ-ಸೀರಿಯಲ್

ದೂರದರ್ಶನದ ಆರಂಬದಲ್ಲಿ ದಾರಾವಾಹಿಗಳು ಹೇಗಿದ್ದವು ??

ಬನ್ನಿ ಸ್ವಲ್ಪ ತಲೆಗೆ ಹುಳ ಬಿಡ್ಕೋಳ್ಳೋ ಕೆಲಸ ಮಾಡೋಣ;

ಆಗ ಪ್ರಸಾರವಾಗುತ್ತಿದ್ದ ದಾರಾವಾಹಿಗಳಿಗೆ ಒಂದು ನಿರ್ದಿಷ್ಟ ಕಥೆ ಇರ್ತಿತ್ತು, ಎಷ್ಟು ಕಂತು ಪ್ರಸಾರವಾಗಬಹುದು? ಎನ್ನುವ ಅಂದಾಜು ಇರುತ್ತಿತ್ತು.
ದಾರಾವಾಹಿಯ ಕ್ಲೈಮ್ಯಾಕ್ಸ್ ಹತ್ತಿರಕ್ಕೆ ಬರುವಂತಿದ್ದರೆ ಅದರ ಸೂಚನೆ ವೀಕ್ಷಕರಿಗೂ ಸಿಗುತ್ತಿತ್ತು.
ದಾರಾವಾಹಿ ಮುಗಿದೇ ಹೋದ ಮೇಲೆ; ಅಯ್ಯೋ ಎಂತಹ ಸೂಪರ್‌ ಆಗಿತ್ತು, ನಾಳೆಯಿಂದ
ಈ ದಾರಾವಾಹಿ ಪ್ರಸಾರವಾಗುವುದಿಲ್ಲವಲ್ಲ? ಎನ್ನುವ ಒಂದು ಸಣ್ಣ ನಿರಾಸೆಯಾದರೂ ಮೂಡಿರುತ್ತಿತ್ತು.

ಉದಾಹರಣೆಗೆ, “ಟ್ರಿಣ್,ಟ್ರಿಣ್,ಟ್ರಿಣ್”ದಾರಾವಾಹಿ, ಅದು ೯೦ರ ದಶಕದಲ್ಲಿ ಪ್ರಸಾರವಾಗುತ್ತಿತ್ತು.
ನನಗೆ ತಿಳಿದ ಮಟ್ಟಿಗೆ ಆಗಿನ ಕಾಲದಲ್ಲಿ ಮಕ್ಕಳ ಅಚ್ಚು-ಮೆಚ್ಚಿನ ದಾರಾವಾಹಿ ಅದು, ಏಕೆಂದರೆ
ಆ ದಾರಾವಾಹಿಯಲ್ಲಿ ಬರುವ ಮುಖ್ಯ ಪಾತ್ರಗಳೂ ಸಹ ಮಕ್ಕಳೇ ಆಗಿದ್ದಿತ್ತು. ಅದರಲ್ಲಿ ಒಬ್ಬ ವಿಲನ್ ಇದ್ದರು.
ಈಗ ಪ್ರಸಾರವಾಗುತ್ತಿರುವ “ಅಶ್ವಿನಿ-ನಕ್ಷತ್ರ” ದಾರಾವಾಹಿಯಲ್ಲಿ ನಾಯಕ ಜೆ.ಕೆ.ಯ ತಂದೆ ಪಾತ್ರ ಮಾಡಿದ್ದಾರಲ್ಲ?
ಅವರೇ ಈ ವಿಲನ್ ಪಾತ್ರ ಮಾಡಿದ್ದರು.
ಲಿಂಗದೇವರು, ಪ್ರಸಾದ್ ನಾಯಕ್, ರವಿಕಿರಣ್, ಸುನಿಲ್ ಪುರಾಣಿಕ್ ಹೀಗೇ ಇನ್ನೂ ಕೆಲವು ನೆಚ್ಚಿನ ನಿರ್ದೇಶಕರಿದ್ದರು/ಇದ್ದಾರೆ.
ನಮ್ಮ ಜನಪ್ರಿಯ ಕನ್ನಡ ನಟ, ನಿರ್ದೇಶಕರಾಗಿದ್ದ ಶಂಕರ್‌ನಾಗ್‌ ಅವರು ನಿರ್ಮಿಸಿದ್ದ “ಮಾಲ್ಗುಡಿ ಡೇಸ್” ಯಾರಿಗೆ
ತಾನೇ ಗೊತ್ತಿಲ್ಲ ಹೇಳಿ; ಇದು ಕೇವಲ ಕನ್ನಡಿಗರಿಗೆ ಅಷ್ಟೇ ಅಲ್ಲ, ನಮ್ಮ ದೇಶದ ಕಿರುತೆರೆಯಲ್ಲಿಯೇ ವಿಶೇಷ ಸ್ಥಾನ ಪಡೆದುಕೊಂಡಿದೆ.
ಆರ್.ಕೆ.ನಾರಾಯಣ್ ಅವರ “ಸ್ವಾಮಿ ಮತ್ತು ಸ್ನೇಹಿತರು”; ಕಾದಂಬರಿ ಆಧಾರಿತ ಈ ದಾರಾವಾಹಿಯಲ್ಲಿ ವಿಷ್ಣುವರ್ಧನ್, ಅನಂತನಾಗ್,
ಶಂಕರ್‌ನಾಗ್‌, ಮಾ|| ಮಂಜುನಾಥ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ;
ಹೀಗೇ ಇನ್ನೂ ಅನೇಕ ಪ್ರಸಿದ್ದ ನಟ/ನಟಿಯರು ಅಭಿನಯಿಸಿರುವುದು ಒಂದು ವಿಶೇಷ;

ಆಗಿನ ಕಾಲದಲ್ಲಿ ವಾರಕ್ಕೆ ಏಳು ದಿನ ಏಳು ದಾರಾವಾಹಿಗಳು; ಇಂದು ಪ್ರಸಾರವಾದ ದಾರಾವಾಹಿಯ ಮುಂದಿನ ಕಂತನ್ನು ವೀಕ್ಷಿಸಬೇಕೆಂದರೆ
ಮತ್ತೆ ಏಳು ದಿನ ಕಾಯಬೇಕಿತ್ತು; ಅದರಲ್ಲಿ ಏನೋ ಒಂದು ಕುತೂಹಲವೂ ಇತ್ತು ಬಿಡಿ.

ಇಂದಿನ ಕಾಲದಲ್ಲಿ ಅಂದರೆ, ಕೆ.ಪಿ.ನಂಜುಂಡಿಯವರ ‘ಪಾರ್ವತಿ’ ದಾರಾವಾಹಿ ಬಂತು ನೋಡಿ…ಅಲ್ಲಿಂದ…
ಕನ್ನಡ ಕಿರುತೆರೆಯಲ್ಲಿ ಈ ದಾರಾವಾಹಿ ಒಂದು ಮೈಲಿಗಲ್ಲು ಎಂದೇ ಹೇಳಬೇಕು.
ಏಕೆಂದರೆ ಈ ದಾರಾವಾಹಿ ನಂತರ ಕನ್ನಡ ದಾರಾವಾಹಿಗಳ ಅದಃಪತನ ಆರಂಭವಾಯಿತು ಎಂದರೆ ಅತಿಷಯೋಕ್ತಿಯಲ್ಲ.
ಇದು ಕನ್ನಡ ಕಿರುತೆರೆಯಲ್ಲಿಯೇ ಪ್ರ-ಪ್ರಥಮ ಮೆಗಾ-ದಾರಾವಾಹಿ.
ಕೆ.ಪಿ.ನಂಜುಂಡಿ ಈ ದಾರಾವಾಹಿ ನಿರ್ಮಾಪಕರು, ಕಲಾ-ಸಾಮ್ರಾಟ್ ಎಸ್.ನಾರಾಯಣ ಅವರ ನಿರ್ದೇಶನ.
ಈ ದಾರಾವಾಹಿ ಪ್ರಸಾರವಾಗುತ್ತಿದ್ದು ಪ್ರತಿರಾತ್ರಿ ೯ ಗಂಟೆಗೆ. ಇದು ಯಾವ ಮಟ್ಟದಲ್ಲಿ ಜನರನ್ನು ಮೋಡಿ ಮಾಡಿತ್ತು? ಅಂತ ಬಹಳ
ಸರಳವಾಗಿ ಹೇಳೋದಾದರೆ, ನೋಡಿ, “ಹೇ ೯ ಗಂಟೆಗೆ ಪಾರ್ವತಿ ದಾರಾವಾಹಿ ಶುರುವಾಗುತ್ತೆ, ಅಷ್ಟರಲ್ಲಿ ಎಲ್ಲರೂ ಊಟ ಮುಗಿಸಿ, ಪಠಾಕಿ ಹೊಡೆದು
ಬಿಡಬೇಕು.” ಎಂದು ದೀಪಾವಳಿ ಹಬ್ಬದ ದಿನದಂದು ಮನೆಯಲ್ಲಿ ಕಟ್ಟಪ್ಪಣೆ ಜಾರಿಗೆಯಾಗಿರುತ್ತಿತ್ತು.

ಈಗಿನ ದಾರವಾಹಿಗಳ ಸ್ಥಿತಿ-ಗತಿಯನ್ನು ಗಮನಿಸೋಣ/ ಏನಪ್ಪಾ ಅಂದರೆ; ಮೊದಲೇ ಹೇಳಿ ಬಿಟ್ತೀನಿ,
ಈಗ ಯಾವುದೇ ದಾರಾವಾಹಿ ಪ್ರಸಾರವಾಗುತ್ತಿದೆ ಎಂದರೆ ಅದು ಆಟೋಮ್ಯಾಟಿಕಲಿ ಎಲ್ಲರಿಗೂ ಗೊತ್ತು, ಇದು ಒಂದು ಮೆಗಾ-ದಾರಾವಾಹಿ ಅಂತ;
ಯಾಕಂದ್ರೆ, ಈಗ ಸಣ್ಣ-ಪುಟ್ಟ ದಾರಾವಾಹಿಗಳಿಗೆ ಅವಕಾಶಗಳೂ ಇಲ್ಲ. ಕಥೆ-ಕಾದಂಬರಿ ಆಧಾರಿತ ದಾರಾವಾಹಿಗಳನ್ನು ಈಗ ಯಾರೂ ನಿರ್ಮಿಸುವುದೇ ಇಲ್ಲ ಬಿಡಿ.
ಈ ಮೆಗಾ ದಾರಾವಾಹಿಗಳು, ಹೆಸರಿಗೆ ಮಾತ್ರ ಮೆಗಾ-ದಾರಾವಾಹಿಗಳು,
ಉಳಿದಂತೆ ಒಂದು ಬಿಚ್ಚಿಟ್ಟ-ರಹಸ್ಯ (ಓಪನ್ – ಸೀಕ್ರೇಟ್) ಏನಪ್ಪಾ ಅಂದ್ರೆ ಈ ದಾರಾವಾಹಿಯನ್ನು ಆರಂಬದ ಕೆಲವು ಕಂತುಗಳು ಮಾತ್ರ ನಿರ್ದಿಷ್ಟವಾಗಿರುತ್ತವೆ;
ಉಳಿದಂತೆ ಮುಂದಿನ ಕಥೆ ಏನು? ಅಂದಾಜು ಎಷ್ಟು ಕಂತು (ಕ್ಷಮಿಸಿ ಅಂದಾಜು ಎಷ್ಟು ವರುಷ?) ದಾರಾವಾಹಿ ಪ್ರಸಾರವಾಗಬಹುದು?
ಕಥೆಯ ಸಂದೇಶವೇನು? ಕಥೆಯ ಸಾರಾಂಶವೇನು? ಕಥೆಯ ಅಂತ್ಯವೇನು? ತಳವೇನು? ಬುಡವೇನು? ಏನು ಅಂದರೆ-ಏನೂ ಗೊತ್ತಿರೊಲ್ಲ. ಯಾರಿಗೂ ಗೊತ್ತಿರೋಲ್ಲ.
ಸ್ವತಃ ನಿರ್ದೇಶಕರಿಗೂ ಅಥವಾ ಕಥೆಗಾರನಿಗೂ ಗೊತ್ತಿರೋಲ್ಲ. ಎಂತಹ ವಿಚಿತ್ರ ನೋಡಿ, ಇನ್ನೂ ಒಂದು ಗಮನಿಸ ಬೇಕಾದ ಅಂಶವೆಂದರೆ
ನಾಳೆ ಪ್ರಸಾರವಾಗ ಬಹುದಾದ ಕಂತಿನ ಕಥೆಯನ್ನು ಸಿದ್ದಪಡಿಸುವ ಮುನ್ನ, ನಿರ್ದೇಶಕರು ಮಾಡಬೇಕಾಗಿರೋ ಮೊದಲ ಕೆಲಸವೆಂದರೆ ನಾಳೆ ಯಾವ-ಯಾವ
ಪಾತ್ರದಾರಿಗಳು ಲಭ್ಯವಿದ್ದಾರೆ ಎಂದು ಗುರುತು ಹಾಕಿಕೊಳ್ಳವುದು, ನಂತರ ಆ ಪಾತ್ರದಾರಿಗಳನ್ನಷ್ಟೇ ಇಟ್ಟುಕೊಂಡು ಕಥೆಯನ್ನು ಬೆಳೆಸಬೇಕು(ತಿರುಚಬೇಕು ಎಂದು ಓದಿಕೊಳ್ಳಿ)
mega-serials
ಇಂತಹ ಮೆಗಾದಾರಾವಾಹಿಗಳಿಗೆ ಮೊದಲು-ಅಂತ್ಯವೆನ್ನುವ ಬೇದ-ಬಾವವಿಲ್ಲ.; ಎಲ್ಲಿಂದ ಬೇಕಾದರೂ ಆರಂಬಿಸ ಬಹುದು ಯಾವೊತ್ತು ಬೇಕಾದರೂ ಮುಗಿಯಬಹುದು.
ಉದಾಹರಣೆಗೆ ಮನೆಯೊಂದು ಮೂರು ಬಾಗಿಲು, ಬದುಕು ಇನ್ನೂ ಮುಂತಾದವು. ಒಮ್ಮೆ ಟಿ.ಎನ್.ಸೀತಾರಂ ರವರ ಮುಕ್ತ ಮುಕ್ತ ದಾರಾವಾಹಿಯ ಬಗ್ಗೆ ಒಬ್ಬ ವೀಕ್ಷಕರು
ಬರೆದಿದ್ದ ವಿಮರ್ಶೆಯ ತುಣುಕನ್ನು ನಿಮ್ಮಲ್ಲಿ ಹಂಚಿಕೊಳ್ಳೋಣ ಎನಿಸುತ್ತಿದೆ, ಅದೇನಪ್ಪ ಎಂದರೆ,
“ಈ ದಾರಾವಾಹಿಯನ್ನು “ನಾನು ಈ ದಾರಾವಾಹಿಯನ್ನು ಎರಡು ವರ್ಷಗಳಿಂದ ಗಮನಿಸುತ್ತಿದ್ದೇನೆ, ಕಥೆ ಮಾತ್ರ ಆವತ್ತು ಎಲ್ಲಿತ್ತೋ ಈವತ್ತೂ ಅಲ್ಲೇ ಇದೇ!!
ಆದರೆ ಪಾತ್ರದಾರಿಗಳು ಮಾತ್ರ ಎರಡೆರಡು K.G. ತೂಕ ಹೆಚ್ಚಿಸಿಕೊಂಡಿದ್ದಾರೆ;” ಎಂದು;
ಇಲ್ಲಿ ಯಾಕೇ ಈ ವಿಮರ್ಶೆಯನ್ನ ಹೇಳಬೇಕಾಗಿದೆ ಎಂದರೆ, ಈಗ ಪ್ರಸಾರವಾಗುತ್ತಿರುವ ದಾರಾವಾಹಿಗಳಲ್ಲಿ ಆಡಂಬರದಕ್ಕೇನೂ ಕೊರತೆ ಇರುವುದಿಲ್ಲ,
ಆದರೆ ಮುಖ್ಯವಾಗಿ ಕಥೆಯೊಂದು ಮಾತ್ರ ಇರುವುದಿಲ್ಲ.
ಹೇಳಿದ್ದನ್ನೇ ತಿರುಚಿ ಮುರುಚಿ, ಹಿಂದೆ-ಮುಂದೆ, ಮೇಲೆ-ಕೆಳಗೆ, ಎಡಕ್ಕೆ-ಬಲಕ್ಕೆ ಮಾಡಿ ತೋರಿಸಿದ್ದನ್ನೇ ಮತ್ತೆ-ಮತ್ತೆ ತೋರಿಸಿ ವೀಕ್ಷಕರ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚುತ್ತಾರೆ;
ದಾರಾವಾಹಿ ಮುಗಿದು ಹೋದ ಮೇಲೆ (ನಿಲ್ಲಿಸಿದ ಮೇಲೆ ಎಂದು ಓದಿಕೊಳ್ಳಿ, ಎಕೆಂದರೆ ಇವರೇ ನಿಲ್ಲಿಸದ ಹೊರತು ಅವುಗಳಿಗೆ ಅಂತ್ಯವೇ ಇಲ್ಲ,
ಒಂದು ನಿರ್ದಿಷ್ಟ ಕಥೆ ಅಂತ ಇದ್ದರೆ ತಾನೆ ಅದಕ್ಕೊಂದು ಅಂತ್ಯ ಅಂತ ಇರುವುದು?
ಅತ್ತೆ-ಸೊಸೆ ಪಿತೂರಿ, ಮಾವ-ಅಳಿಯ ಪಿತೂರಿ, ನಾದಿನಿ-ಮೈದುನ ಪಿತೂರಿ, ಇತ್ಯಾದಿ ಇತ್ಯಾದಿ, ಇಂತಹ ಪಿತೂರಿಯ ಸಣ್ಣ ಎಳೆಗಳನ್ನು ಇಟ್ಟುಕೊಂಡೇ
ಇವರು ಒಂದು ದಾರಾವಾಹಿಯನ್ನು ಅನಿರ್ದಿಷ್ಟ ಕಾಲದವರೆಗೆ ಎಳೆದು ಕೊಂಡು ಹೋಗಿಬಿಡುತ್ತಾರೆ.
.
.
ಕೊನೆಯ ಕೊಸರು:
ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವ ಎಲ್ಲಾ ಸೂಚನೆಗಳೂ ಕಂಡು ಬಂದಿರುವುದರಿಂದ;
ಮುಂದೆ ಅದು ಕನ್ನಡ ಕಿರುತೆರೆಯ ಮೇಲೆ ಅದು ಯಾವ ರೀತಿಯ (ಪ್ರತೀಕೂಲ/ಅನುಕೂಲ?) ಪರಿಣಾಮಗಳನ್ನು ಬೀರುತ್ತದೆ ಕಾದುನೋಡಬೇಕಿದೆ.

Permanent link to this article: http://www.pada.pro/%e0%b2%ae%e0%b3%86%e0%b2%97%e0%b2%be-%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d/

Leave a Reply

Your email address will not be published. Required fields are marked *